ಎನ್‌ಜಿಎಂಎ (NGMA) ನಲ್ಲಿ ಕೇರಳ ಪ್ರವಾಸೋದ್ಯಮದ 'ಲೆನ್‌ಸ್ಕೇಪ್ ಕೇರಳ' ಛಾಯಾಚಿತ್ರ ಪ್ರದರ್ಶನ
- ಫೆಬ್ರವರಿ 27 ರಂದು ಉದ್ಘಾಟನೆ: 100 ಅತ್ಯುತ್ತಮ ಛಾಯಾಚಿತ್ರಗಳ ಸಂಗ್ರಹ
Bengaluru / February 26, 2026
ಬೆಂಗಳೂರು, 26 ಫೆಬ್ರವರಿ 2026: ಭಾರತದ ವಿವಿಧ ಭಾಗಗಳ 10 ಖ್ಯಾತ ಛಾಯಾಗ್ರಾಹಕರು ಸೆರೆಹಿಡಿದ ಕೇರಳದ 100 ಅತ್ಯುತ್ತಮ ಛಾಯಾಚಿತ್ರಗಳನ್ನೊಳಗೊಂಡ ಕೇರಳ ಪ್ರವಾಸೋದ್ಯಮ ಇಲಾಖೆಯ 'ಲೆನ್‌ಸ್ಕೇಪ್ ಕೇರಳ' (Lenscape Kerala) ಛಾಯಾಚಿತ್ರ ಪ್ರದರ್ಶನವು ನಗರದ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ (NGMA) ನಲ್ಲಿ ಫೆಬ್ರವರಿ 27 ರಂದು ಆರಂಭವಾಗಲಿದೆ.
ಕೊಚ್ಚಿ ಬಿನಾಲೆ ಫೌಂಡೇಶನ್ ಅಧ್ಯಕ್ಷರು ಹಾಗೂ ಕೇರಳದ ಮಾಜಿ ಮುಖ್ಯ ಕಾರ್ಯದರ್ಶಿ ಡಾ. ವೇಣು ವಿ. ಭಾ.ಆ.ಸೇ ಅವರು ಫೆಬ್ರವರಿ 27 ರಂದು ಸಂಜೆ 5 ಗಂಟೆಗೆ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಎನ್‌ಜಿಎಂಎ ನಿರ್ದೇಶಕರಾದ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಭಾ.ಆ.ಸೇ ಉಪಸ್ಥಿತರಿರುತ್ತಾರೆ.
ಎನ್‌ಜಿಎಂಎ ಮತ್ತು ಕೇರಳ ಪ್ರವಾಸೋದ್ಯಮ ಇಲಾಖೆ ಜಂಟಿಯಾಗಿ ಆಯೋಜಿಸಿರುವ ಈ ಪ್ರದರ್ಶನವು ಮಾರ್ಚ್ 1 ರವರೆಗೆ ಪ್ರತಿದಿನ ಬೆಳಿಗ್ಗೆ 11 ರಿಂದ ರಾತ್ರಿ 8 ಗಂಟೆಯವರೆಗೆ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿರಲಿದೆ.
ಖ್ಯಾತ ಕಲಾ ವಿಮರ್ಶಕಿ ಉಮಾ ನಾಯರ್ ಅವರ ಕ್ಯುರೇಷನ್ (Curated) ಹಾಗೂ ಪ್ರಶಸ್ತಿ ವಿಜೇತ ಛಾಯಾಗ್ರಾಹಕ ಬಾಲನ್ ಮಾಧವನ್ ಅವರ ನಿರ್ದೇಶನದಲ್ಲಿ ಈ ಪ್ರದರ್ಶನ ಮೂಡಿಬಂದಿದೆ. ಎಚ್. ಸತೀಶ್, ಶಿವಾಂಗ್ ಮೆಹ್ತಾ, ಅಮಿತ್ ಪಾಸ್ರಿಚಾ, ಸೌರಭ್ ಆನಂದ್ ಚಟರ್ಜಿ, ಸೈಬಲ್ ದಾಸ್, ಉಮೇಶ್ ಗೋಗ್ನಾ, ಮನೋಜ್ ಅರೋರಾ, ಐಶ್ವರ್ಯ ಶ್ರೀಧರ್, ನತಾಶಾ ಕರ್ತಾರ್ ಹೇಮರಜನಿ ಮತ್ತು ಕೌಂತೇಯ ಸಿನ್ಹಾ ಅವರ ಲೆನ್ಸ್ ಮೂಲಕ ಕೇರಳದ ಅದ್ಭುತ ಭಾವಚಿತ್ರಗಳು, ಸಂಸ್ಕೃತಿ, ಪ್ರಕೃತಿ ಸೌಂದರ್ಯ, ವನ್ಯಜೀವಿ ಮತ್ತು ದೈನಂದಿನ ಬದುಕಿನ ಕ್ಷಣಗಳನ್ನು "ದೇವರ ಸ್ವಂತ ನಾಡಿನ" (God's Own Country) ರೋಮಾಂಚಕ ಚಿತ್ರಣವಾಗಿ ಕಟ್ಟಿಕೊಡಲಾಗಿದೆ.
ಉಚಿತ ಮಾಸ್ಟರ್‌ಕ್ಲಾಸ್: ಛಾಯಾಗ್ರಹಣ ಆಸಕ್ತರಿಗಾಗಿ ಫೆಬ್ರವರಿ 28 ರಂದು ಖ್ಯಾತ ಛಾಯಾಗ್ರಾಹಕರಾದ ಬಾಲನ್ ಮಾಧವನ್, ನತಾಶಾ ಕೆ. ಹೇಮರಜನಿ, ಎಚ್. ಸತೀಶ್ ಮತ್ತು ಸೌರಭ್ ಎ. ಚಟರ್ಜಿ ಅವರಿಂದ ಉಚಿತ 'ಛಾಯಾಗ್ರಹಣ ಮಾಸ್ಟರ್‌ಕ್ಲಾಸ್' (Photography Masterclass) ಅನ್ನು ಸಹ ಆಯೋಜಿಸಲಾಗಿದೆ.
10 ನಗರಗಳ ಪ್ರವಾಸ: ಜನವರಿ 20 ರಂದು ನವದೆಹಲಿಯಲ್ಲಿ ಆರಂಭವಾದ ಈ 10-ನಗರಗಳ ಸಂಚಾರಿ ಪ್ರದರ್ಶನವು ವಡೋದರ, ಅಹಮದಾಬಾದ್, ಪುಣೆ ಮತ್ತು ಮುಂಬೈನಲ್ಲಿ ಈಗಾಗಲೇ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಬೆಂಗಳೂರಿನ ಪ್ರದರ್ಶನದ ನಂತರ, ಚೆನ್ನೈ, ಹೈದರಾಬಾದ್ ಮತ್ತು ಸೂರತ್‌ಗೆ ಪ್ರಯಾಣ ಬೆಳೆಸಲಿರುವ ಈ ಅಭಿಯಾನವು ಮಾರ್ಚ್ 29 ರಂದು ಕೋಲ್ಕತ್ತಾದಲ್ಲಿ ಸಂಪನ್ನಗೊಳ್ಳಲಿದೆ.