ಕೋವಿಡ್-19 ಮಾನವನ ಮಿದುಳಿಗೆ ಆಘಾತ ಉಂಟು ಮಾಡಬಹುದು ಹಾಗೂ ಆಲ್ಙೈಮರ್ ಮತ್ತು ಪಾರ್ಕಿನ್ಸನ್ನಂತಹ ನರಸಂಬಂಧಿ ಕಾಯಿಲೆಗಳನ್ನು ಉಂಟು ಮಾಡಬಹುದು ಎಂದು ಎಚ್ಚರಿಸಿದ ವೈದ್ಯರು

New Delhi / February 8, 2023

ನವದೆಹಲಿ, ಫೆ. 8: ಕೋವಿಡ್-19 ಅನ್ನು ಪ್ರಾಥಮಿಕವಾಗಿ ಶ್ವಾಸಕೋಶದ ಕಾಯಿಲೆ ಎಂದು ಪರಿಗಣಿಸಿ, ಚಿಕಿತ್ಸೆ ನೀಡಲಾಗಿತ್ತು, ಆದರೆ ಅದು ಮಿದುಳಿಗೆ ಆಘಾತ ಉಂಟು ಮಾಡುವ ಮೂಲಕ ಆಲ್ಙೈಮರ್ ಮತ್ತು ಪಾರ್ಕಿನ್ಸನ್‌ನಂತಹ ನರಶಮನಕಾರಿ (ನ್ಯೂರೊಡೀಜನರೇಟಿವ್) ಕಾಯಿಲೆಗಳನ್ನು ಹೆಚ್ಚಿಸುವ ಅಥವಾ ಉಲ್ಬಣಿಸುವ ಸಾಧ್ಯತೆ ಇರುವುದರಿಂದ ಮಾನವ ದೇಹದ ಮೇಲೆ ಅದು ಬೀರುವ ಪರಿಣಾಮವು ಹೆಚ್ಚು ಅಪಾಯಕಾರಿಯಾಗಿದೆ ಹಾಗೂ ವ್ಯಾಪಕವಾಗಿದೆ ಎಂದು ಪ್ರಮುಖ ವೈದ್ಯರು ಎಚ್ಚರಿಸಿದ್ದಾರೆ.  

 

ಈ ಪಿಡುಗನ್ನು ‘ಸಾವಿರ ತಲೆಗಳ ರಾಕ್ಷಸ’ ಎಂದು ವ್ಯಾಖ್ಯಾನಿಸಿರುವ ನವದೆಹಲಿಯ ವರ್ಧಮಾನ್ ಮೆಡಿಕಲ್ ಕಾಲೇಜು ಮತ್ತು ಸಫ್ದರ್‌ಜಂಗ್ ಆಸ್ಪತ್ರೆಯ ಸೀನಿಯರ್ ಪ್ರೊಫೆಸರ್ ಡಾ. ಯತೀಶ್ ಅಗರ್‌ವಾಲ್ ಅವರು, ಕೋವಿಡ್-19 ರ ವ್ಯಾಪಿಸುವಿಕೆಯು ಮೂಗು, ಗಂಟಲು ಹಾಗೂ ಶ್ವಾಸಕೋಶಗಳನ್ನು ಮೀರಿದೆ ಹಾಗೂ ಅದು ದೇಹದ ಪ್ರಮುಖ ಅಂಗವಾಗಿರುವ ಮಿದುಳಿನ ಮೇಲೆ ಆಘಾತ ಉಂಟು ಮಾಡಬಹುದು ಎಂದಿದ್ದಾರೆ.

 

36-84 ಪ್ರತಿಶತ ಕೋವಿಡ್-19 ರೋಗಿಗಳಲ್ಲಿ ನರಸಂಬಂಧಿ ತೊಂದರೆಗಳು ಉಂಟಾಗಿವೆ ಎಂಬುದನ್ನು ಹಲವಾರು ವೈದ್ಯಕೀಯ ಅಧ್ಯಯನಗಳು ಬಹಿರಂಗಪಡಿಸಿವೆ. ಅಚ್ಚರಿಯ ಸಂಗತಿಯೆಂದರೆ, ಕಾಯಿಲೆಯ ನಂತರ ದೀರ್ಘಾವಧಿಯವರೆಗೂ ನರಸಂಬಂಧಿ ರೋಗಲಕ್ಷಣಗಳನ್ನು ಅನುಭವಿಸಿದವರು 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಹಾಗೂ ಸೋಂಕಿಗೆ ಒಳಗಾಗುವ ಮೊದಲು ಅವರು ಆರೋಗ್ಯವಾಗಿಯೇ ಇದ್ದರು ಎಂದು ಮನೋರಮಾ ಇಯರ್‌ಬುಕ್ 2023 ಗೆ ಬರೆದ ವಿಶೇಷ ಲೇಖನದಲ್ಲಿ ಅವರು ಪ್ರಸ್ತಾಪಿಸಿದ್ದಾರೆ.

 

ಗುಣಮುಖರಾದ ಗಣನೀಯ ಸಂಖ್ಯೆಯ ಜನರಲ್ಲಿ ಮಾರಣಾಂತಿಕ ಆಘಾತಗಳು, ಒಬ್ಸೆಸ್ಸೀವ್ ಕಂಪಲ್ಸೀವ್ ಡಿಸಾರ್ಡರ್ ಮತ್ತು ಖಿನ್ನತೆ ಉಂಟಾಗಬಹುದು. ಒತ್ತಡ ಉಂಟು ಮಾಡುವ ಕೋವಿಡ್-19 ರ ಈ ಅಂಶಗಳು ಅತಿಯಾದ ಮದ್ಯಪಾನ, ಮಾದಕ ವ್ಯಸನ, ಆತ್ಮಹತ್ಯೆ ಪ್ರವೃತ್ತಿ, ಭ್ರಮೆಗಳು ಮತ್ತು ಮಾನಸಿಕ ಅವ್ಯವಸ್ಥೆಯಂತಹ ಹಲವಾರು ಅನಾರೋಗ್ಯಕರ ವರ್ತನೆಗಳಿಗೂ ಕಾರಣವಾಗಬಹುದು. ಕೋವಿಡ್-19 ರಿಂದ ಬಳಲಿದವರು, ಅವರು ಕುಟುಂಬ ಸದಸ್ಯರು ಹಾಗೂ ಸಮುದಾಯದಲ್ಲಿ ಸಾಧಾರಣ ತೀವ್ರತೆಯಿಂದ ಗಂಭೀರವಾದ ಆತಂಕದ ರೋಗಲಕ್ಷಣಗಳು ಸಾಮಾನ್ಯವಾಗಿವೆ.

 

ಬಹು-ರೂಪಾಂತರಿ ಕೊರೋನಾ ವೈರಾಣು ಹಲವಾರು ವಿಧಗಳಲ್ಲಿ ಮಿದುಳಿನ ಕಾರ್ಯನಿರ್ವಹಣೆ, ವರ್ತನೆ ಹಾಗೂ ಬೌದ್ಧಿಕ ಸಾಮರ್ಥ್ಯಗಳ ಮೇಲೆ ಪರಿಣಾಮ ಬೀರಬಹುದು ಎಂಬುದಕ್ಕೆ ಈಗ ವಸ್ತುನಿಷ್ಠ ಪುರಾವೆಗಳು ದೊರೆತಿವೆ. “ಈ ಪರಿಣಾಮಗಳಲ್ಲಿ ಕೆಲವು ಅಲ್ಪಾವಧಿಯವಾಗಿದ್ದು, ಸ್ವಲ್ಪ ಸಮಯದಲ್ಲಿ ಮುಗಿದುಹೋಗುತ್ತವೆ, ಇನ್ನುಳಿದವು ದೀರ್ಘಾವಧಿಯವು ಹಾಗೂ ಅವು ರೋಗಿಗಳ ಜೀವನವನ್ನು ಸಂಕಷ್ಟಕ್ಕೆ ದೂಡಬಹುದು” ಎಂದು ಗುರು ಗೋವಿಂದ್ ಸಿಂಗ್ ಇಂದ್ರಪ್ರಸ್ಥ ವಿಶ್ವವಿದ್ಯಾನಿಲಯದ ಯುನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ ಅಂಡ್ ಪ್ಯಾರಾ ಮೆಡಿಕಲ್ ಹಲ್ತ್ ಸೈನ್ಸಸ್‌ನ ಡೀನ್ ಸಹ ಆಗಿರುವ ಡಾ. ಅಗರ್‌ವಾಲ್ ಅವರು ಹೇಳಿದ್ದಾರೆ.

 

“ಅಪಾಯ ಎದುರಾಗುವ ಕುರಿತು ಎಚ್ಚರಿಕೆಯ ಮಾತುಗಳನ್ನು ತೀರಾ ದೃಢವಾಗಿ ಹೇಳದೇ, ಕೋವಿಡ್-19 ರ ಸಂಭಾವ್ಯ ದೀರ್ಘಾವಧಿ ಪರಿಣಾಮಗಳನ್ನು ನಿರಂತರವಾಗಿ ಗಮನಿಸುತ್ತಿರುವುದು ಅತ್ಯುತ್ತಮ ಪರಿಹಾರೋಪಾಯವಾಗಿದೆ ಎಂಬುದಕ್ಕೆ ಈಗ ಖಚಿತ ಪುರಾವೆ ದೊರೆತಿದೆ. ಇದು ವ್ಯಕ್ತಿಗತ ಜೀವನದ ಮೇಲೆ ಗುರುತರವಾದ ಪರಿಣಾಮ ಬೀರಬಲ್ಲದು ಹಾಗೂ ಅವರ ಆಲೋಚನೆ, ತಾರ್ಕಿಕ ಶಕ್ತಿ ಹಾಗೂ ನೆನಪಿಸಿಕೊಳ್ಳುವ ಕ್ರಿಯೆಗಳಿಗೆ ತೊಂದರೆ ಮಾಡಿ ಅವರ ದೈನಂದಿನ ಕಾರ್ಯಗಳ ಮೇಲೆ ತನ್ನ ಕಬಂಧಬಾಹುಗಳನ್ನು ಚಾಚಬಹುದು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

 

ಮಿಲಿಯನ್‌ಗಟ್ಟಲೆ ಜನರ ಮೇಲೆ ಪರಿಣಾಮ ಬೀರಿರುವುದರಿಂದಾಗಿ, ಕೋವಿಡ್-19 ರ ನರಸಂಬಂಧಿ ಮಾನಸಿಕ ಹಾಗೂ ಯೋಚನಾ ಶಕ್ತಿಯ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಸರಿಯಾದ ತಿಳಿವಳಿಕೆಯನ್ನು ಮೂಡಿಸುವುದು ಬಹುಮುಖ್ಯವಾಗಿದೆ. ಇನ್ನೂ ಹಲವರು ಪತ್ತೆಯಾಗದೇ ಇರಬಹುದು ಮತ್ತು ಸೋಂಕಿಗೆ ಒಳಗಾದವರ ಸಂಖ್ಯೆಯು ಈಗಲೂ ಏರುತ್ತಲೇ ಇದೆ. “ಈ ಸಣ್ಣ ಸಂಖ್ಯೆಯಲ್ಲಿ ಇರುವವರು ನರಸಂಬಂಧಿ ಮಾನಸಿಕ ಹಾಗೂ ಯೋಚನಾ ಶಕ್ತಿಯ ತೊಂದರೆಗಳಿಂದ ಬಳಲಿದರೂ ಸಹ ಸಾರ್ವಜನಿಕ ಆರೋಗ್ಯ ಸಮಸ್ಯೆಗಳು ಗಣನೀಯ ಪ್ರಮಾಣದಲ್ಲಿರುತ್ತವೆ” ಎಂದು ಅವರು ಎಚ್ಚರಿಸಿದ್ದಾರೆ. 

 

ಇಂತಹ ಪರಿಸ್ಥಿತಿಯು ಈ ಒಟ್ಟಾರೆ ಪರಿಣಾಮಗಳ ಕುರಿತು ಸರಳವಾದ ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ ನೀತಿಗಳನ್ನು ಅಭಿವೃದ್ಧಿಪಡಿಸುವುದನ್ನು ಕಡ್ಡಾಯಗೊಳಿಸುತ್ತದೆ ಎಂದು ಡಾ. ಅಗರ್‌ವಾಲ್ ಅವರು ಹೇಳಿದ್ದಾರೆ. “ಪರಿಣಾಮಕ್ಕೆ ಒಳಗಾದ ಜನರಲ್ಲಿ, ಅವರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ, ಹಣಕಾಸು ನಿರ್ವಹಣೆ, ದೈನಂದಿನ ಕೌಟುಂಬಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆಯನ್ನು ಮೌಲ್ಯಮಾಪನ ಮಾಡಲು ಮತ್ತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮಯಕ್ಕೆ ಸರಿಯಾಗಿ ವ್ಯಕ್ತಿಗತವಾದ ವೈದ್ಯಕೀಯ ಪರೀಕ್ಷೆಯನ್ನು ನಡೆಸಬೇಕು”. 

 

ವೈದ್ಯಕೀಯ ಮೌಲ್ಯಮಾಪನವನ್ನು ಆಧರಿಸಿ, ಕೋವಿಡ್‌ನಿಂದ ಗುಣಮುಖರಾಗಿರುವವರಲ್ಲಿ ಯಾರಿಗೆ ಸಹಾಯದ ಅಗತ್ಯವಿದೆಯೋ ಅವರಿಗೆ ವ್ಯಕ್ತಿಗತ ಅಗತ್ಯಗಳನ್ನು ಆಧರಿಸಿ ಪುನಶ್ಚೇತನ ಕಾರ್ಯಕ್ರಮವನ್ನು ರೂಪಿಸಬೇಕು. ಕುಟುಂಬ ವೈದ್ಯರು, ನರರೋಗ ಶಾಸ್ತ್ರಜ್ಞರು, ಫಿಸಿಯೋಥೆರಪಿಸ್ಟ್, ಮನೋವೈದ್ಯರು ಮತ್ತು ಮನಃಶಾಸ್ತ್ರಜ್ಞರನ್ನು ಒಳಗೊಂಡ ತಂಡವು ಪರಿಹಾರಾತ್ಮಕ ಪ್ರಕ್ರಿಯೆಯಲ್ಲಿ ಸಹಾಯ ಮಾಡಬಹುದು. “ಜನರು ತಮ್ಮ ಕೊರತೆಗಳನ್ನು ಮೀರಿ ಸಮರ್ಥರಾಗಲು ಮತ್ತು ಸಹಜ ಜೀವನಕ್ಕೆ ಹಿಂತಿರುಗಲು ಸಹಾಯ ಮಾಡುವುದು ಪ್ರಮುಖ ಉದ್ದೇಶವಾಗಿದೆ” ಎಂಬುದನ್ನು ಅವರು ಒತ್ತಿಹೇಳಿದ್ದಾರೆ. 

 

ವಿಶ್ವದಾದ್ಯಂತ ಈ ರೋಗದಿಂದ ಉಂಟಾಗಿರುವ ಅಪಾರ ಪ್ರಮಾಣದ ಅಸ್ವಸ್ಥತೆ ಮತ್ತು ಮರಣವವನ್ನು ತಾಂಡವ (ವಿನಾಶದ ನೃತ್ಯ) ಪರಿಣಾಮ ಎಂದು ಬಣ್ಣಿಸಿರುವ ಅವರು, ಕೋವಿಡ್-19 ಹಲವಾರು ನರಸಂಬಂಧಿ ತೊಂದರೆಗಳನ್ನು ಹೊಂದಿದೆ, ಆದರೆ ದೇಹದ ಪ್ರತಿರಕ್ಷಣಾ ವ್ಯವಸ್ಥೆಗೆ ಉಂಟಾಗುವ ಹಾನಿಯು ಅವುಗಳಲ್ಲಿ ಪ್ರಮುಖವಾದದ್ದು ಆಗಿದೆ. “ಈ ವೈರಾಣು ದೇಹದ ರಕ್ಷಣಾ ವ್ಯವಸ್ಥೆಯನ್ನು ಪ್ರಚೋದಿಸುತ್ತದೆ, ಆದರೆ ರಕ್ಷಣಾ ವ್ಯವಸ್ಥೆಯು ಕೊರೋನಾ ವೈರಾಣುವಿನ ವಿರುದ್ಧ ಹೋರಾಡುವ ಬದಲು ತನ್ನದೇ ದೇಹದ ಜೀವಕೋಶಗಳನ್ನು ವೈರಿ ಎಂದು ಗುರಿಯಾಗಿಸಿಕೊಂಡು ಮೂರ್ಖತನಕ್ಕೆ ಈಡಾಗುತ್ತದೆ. ಅಸ್ತವ್ಯಸ್ತಗೊಂಡ ವ್ಯವಸ್ಥೆಯು ಆ ಮೂಲಕ ಮಿದುಳಿನ ಜೀವಕೋಶಗಳು ಮತ್ತು ಇತರ ಅಂಗಾಂಗ ವ್ಯವಸ್ಥೆಗಳ ಮೇಲೆ ದಾಳಿ ಮಾಡುತ್ತದೆ. ಮಿದುಳಿನಲ್ಲಿ ಕೆಲವೊಮ್ಮೆ ಎನ್‌ಸೆಫಾಲಿಟಿಸ್ ಎಂದು ಕರೆಯಲಾಗುವ ಗಂಭೀರ ಸ್ವರೂಪದ ಉರಿಯೂತವನ್ನು ಇದು ಉಂಟು ಮಾಡುತ್ತದೆ”.    

 

ವೈರಾಣು ರಕ್ತ-ಮಿದುಳಿನ ತಡೆಗೋಡೆಯನ್ನು ದಾಟಿ ನೇರವಾಗಿ ಮಿದುಳಿನ ಹಾನಿಯನ್ನು ಸಹ ಮಾಡಿ, ರಕ್ತನಾಳಗಳಲ್ಲಿ ಒತ್ತಡವನ್ನು ಹೆಚ್ಚಿಸಿ ಮಿದುಳಿನ ರಕ್ತಸ್ರವಾವವನ್ನು ಉಂಟು ಮಾಡುತ್ತದೆ ಹಾಗೂ ಮಿದುಳಿನ ಆಘಾತವನ್ನು ಪ್ರಚೋದಿಸಿ ದೇಹದ ರಕ್ತಹೆಪ್ಪುಗಟ್ಟುವ ವ್ಯವಸ್ಥೆಯಯನ್ನು ಅಸಮರ್ಥಗೊಳಿಸುತ್ತದೆ. 

 

ಕೊರೋನಾವೈರಾಣುವಿನ ಸೋಂಕು ಹಲವು ರೀತಿಯ ನರಸಂಬಂಧಿ ಸಮಸ್ಯೆಗಳನ್ನು ಉಂಟು ಮಾಡಬಹುದು. ಸುಮಾರು ಎರಡನೇ-ಮೂರರಷ್ಟು ಕೋವಿಡ್-19 ರೋಗಿಗಳು ವಾಸನೆ ಗ್ರಹಿಸುವುದನ್ನು ಮತ್ತು ರುಚಿ ಕಳೆದುಕೊಂಡಿರುವುದರ ಬಗ್ಗೆ ದೂರಿದ್ದಾರೆ. ಇವುಗಳು ರೋಗದ ಮೊದಲ ಲಕ್ಷಣಗಳಾಗಿವೆ ಹಾಗೂ ಅವು ದೀರ್ಘಾವಧಿಗೆ ಉಳಿಯಬಹುದು. ಪ್ರಸ್ತುತ ಪಿಡುಗಿನ ಅವಧಿಯಲ್ಲಿ ಬಹಿರಂಗವಾದ ರೋಗಲಕ್ಷಣಗಳು ರೋಗದ ತ್ವರಿತ ಪತ್ತೆಹಚ್ಚುವಿಕೆಗೆ ಸಹಾಯ ಮಾಡುತ್ತವೆ. ಆದರೆ ಕೆಲವು ರೋಗಿಗಳು ಮಿದುಳಿನ ಉರಿಯೂತ, ಬಾವು, ಸ್ಟ್ರೋಕ್‌ಗಳು ಮತ್ತು ಮಿದುಳಿನ ರಕ್ತಸ್ರಾವದಿಂದ ಬಳಲಬಹುದು. ಈ ರೋಗಿಗಳು ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಹಾಗೂ ಗುಣಮುಖರಾಗಲು ಅವರಿಗೆ ದೀರ್ಘಾವಧಿ ತೀವ್ರ ವೈದ್ಯಕೀಯ ಆರೈಕೆಯ ಅಗತ್ಯವಿರುತ್ತದೆ.

 

“ಈಗಲೇ ಇದೆಲ್ಲವನ್ನೂ ಹೇಳುವುದು ತೀರಾ ಬೇಗ ಎನಿಸಿದರೂ, ದೀರ್ಘಾವಧಿ ಕೋವಿಡ್-19 ರಲ್ಲಿ ಗಮನಿಸಿದ ನರದ ಉರಿಯೂತ ಮತ್ತು ನರಸಂಬಂಧಿ ಹಾನಿಯ ಸಂಭಾವ್ಯ ದೀರ್ಘಾವಧಿ ಪರಿಣಾಮಗಳ ಕುರಿತು ಅನಿಶ್ಚಿತತೆ ಉಂಟು ಮಾಡುತ್ತದೆ. ಪ್ರಸ್ತುತ ಪರಿಸ್ಥಿತಿಯು ಗೊಂದಲಮಯವಾಗಿದೆ, ಆದರೆ ಈ ಸಂಕೀರ್ಣ ಸಂದರ್ಭಗಳು ಯಾವ ಸಮಸ್ಯೆ ಇಲ್ಲದೇ ಬಗೆಹರಿಯಬಹುದು” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Photo Gallery